ಪಾರ್ಸಿ ಛಂದಸ್ಸು - 
ಕ್ರಿ.ಶ. 7.ನೆಯ ಶತಮಾನದ ಎರಡನೆಯ ಭಾಗದಲ್ಲಿ ಅರಬ್ಬರು ಪರ್ಷಿಯ ದೇಶವನ್ನು ಗೆದ್ದು ತಮ್ಮದನ್ನಾಗಿಸಿಕೊಡರು. ಅಲ್ಲಿಂದ ಮುಂದೆ ಪರ್ಷಿಯನ್ ಭಾಷೆ ಮತ್ತು ಸಾಹಿತ್ಯಗಳ ಮೇಲೆ ಅರಬ್ಬೀ ಪ್ರಭಾವ ಹೆಚ್ಚು ಹೆಚ್ಚಾಗುತ್ತಾ ಬಂತು. ಆದರೂ ಹಿಂದಿನಿಂದ ಪರ್ಷಿಯದಲ್ಲಿ ಕಾವ್ಯ ವ್ಯಾಪಾರ ಇದ್ದಿತೆಂಬುದೂ ಆ ಕಾವ್ಯ. ಛಂದೋಬದ್ದವಾಗಿದ್ದಿತ್ತೆಂಬುದೂ ನಿರ್ವಿವಾದ ಸಂಗತಿಗಳು. ಪ್ರಾಚೀನ ಗಾಥಾಗಳಲ್ಲಿ (ಸಂಕೀರ್ತನೆಗಳು) ಪ್ರತಿ ಪಂಕ್ತಿಗೂ ನಿಯತ ಸಂಖ್ಯೆಯ ಉಚ್ಚಾರಾಂಶಗಳು ಕೂಡಿ ಬಂದು ಪದಕ್ಕೆ ಲಯವನ್ನು ಒದಗಿಸುತ್ತವೆ. ಅವಸ್ತಾದ ಯಾಸ್ಟ್‍ಗಳು (ಪ್ರಶಂಸೆಗಳು) ಮುಖ್ಯವಾಗಿ ಎಂಟು ಉಚ್ಚಾರಾಂಶಗಳು ಪಂಕ್ತಿಯ ಗುಚ್ಚಗಳನ್ನು ಪ್ರಕಟಿಸುತ್ತವೆ. ಪ್ರಾಚೀನ ಪದ್ಧತಿ ಬೇಗ ಬೇಗ ಮಾರ್ಪಟ್ಟಿತು. ಹಾಗೆ ಪ್ರಭಾವಿತವಾಗಿ ಮಾರ್ಪಡುವುದು ಮಾನವಜೀವನದ ಸಹಜ ಲಕ್ಷóಣ. ಗೆದ್ದವರ ಸಂಸ್ಕøತಿಯನ್ನು ಸೋತವರು ಅನುಕರಿಸುತ್ತ, ತಮ್ಮ ಸ್ವಂತ ಸಂಸ್ಕøತಿಯನ್ನು ಅಷ್ಟಿಷ್ಟು ಬದಲಾಯಿಸಿಕೊಳ್ಳಬೇಕಾದ್ದು ಅನಿವಾರ್ಯ. ಕ್ರಿ. ಶ. 8.ನೆಯ ಶತಮಾನದಲ್ಲಿಯ ಖಲೀಲ್ ಬಿನ್ ಅಹ್ಮದ್ ಎಂಬಾತನಿಂದ ಸೂತ್ರಿತವಾದ ಅರಬ್ಬಿ ಛಂದಸ್ಸು ಪರ್ಷಿಯನ್ನಿಗೂ ಅನ್ವಯವಾಗಲಾರಂಭಿಸಿತು. ಆತ ನಿಗಧಿ ಮಾಡಿದ ಛಂದೋ ಪ್ರಕಾರಗಳು ಹದಿನೈದು; ಕಮೀಲ್, ಖಫೀಫ್, ಟವೀಲ್, ಬಸೀತ್, ಮದೀದ್, ಮುಕ್ತಾಸಾಬ್, ಮುಜ್‍ತಾಸ್, ಮುನ್‍ಸರೀ, ಮುಸಾರಿ, ಮುಟಾ ಖರೀಬ್, ರಜೇಜ್, ರಮಾಲ್ ವಫೀರ್, ಸೆರೀ, ಹಜೆಜ್, ಅಹ್ಮದನ ಶಿಷ್ಯನಾದ ಅಬುಲ್ ಹಸನ್ ಆಕ್ಫಾಷ್ ಎಂಬಾತ ಮುತಾದಾರಿಕ್ ಎಂಬ ಹದಿನಾರನೆಯದನ್ನು ರೂಪಿಸಿದ. ಅನಂತರ ಬಂದ ಕವಿಗಳು ಮತ್ತು ಮೂರು ಪ್ರಕಾರಗಳನ್ನು ವಿರಚಿಸಿ ಬಳಕೆಗೆ ತಂದರು, ಗರೀಬ್, ಜದೀದ್, ಮುಷಾಕ್ಲ್, ಅಂತೂ ಪರ್ಷಿಯನ್ ಛಂದೋ ಪ್ರಕಾರಗಳು ಹತ್ತೊಂಬತ್ತು. ಅವುಗಳಲ್ಲಿ ಕಮೀಲ್, ಮಟಾಖರೀಬ್, ಮುತಾದಾರಿಕ್, ರಮಾಲ್, ರಜೆಜ್, ವಫೀರ್ ಮತ್ತು ಹಜೆಜ್ - ಈ ಏಳನ್ನು ಸರಳ ಛಂದಸ್ಸು ಎಂದೂ ಮಿಕ್ಕವುಗಳನ್ನು ಸಂಯುಕ್ತ ಛಂದಸ್ಸು ಎಂದು ಕರೆಯುವುದು ವಾಡಿಕೆ.

ಇವಲ್ಲದೆ ಅರಬ್ಬರಿಂದ ಎರವಲು ಪಡೆದ ಇಪ್ಪತ್ತೆರಡು ಮಾರ್ಪಾಟುಗಳು ಸ್ವಂತ ನಿರ್ಮಾಣದ ಹದಿಮೂರು ಮಾರ್ಪಾಟುಗಳು ಪರ್ಷಿಯನ್ ಛಂದಸ್ಸಿಗೆ ವೈವಿಧ್ಯ ತಂದುಕೊಟ್ಟಿವೆ.

ಪದ್ಯ ಪಂಕ್ತಿ (ಮಿಸ್ರಾ) ಆಗುವುದು ಉಚ್ಚಾರಾಂಶ (ಯೂಸೂಲ್) ಮತ್ತು ಗಣ (ಅರ್ಕಾನ್-)ಗಳಿಂದ. ಯೂಸೂಲ್ ಮೂರು ಬಗೆ: ಸಬಾಬ್, ವತಾದ್ ಮತ್ತು ಫಾಸಿಲ. ಆ ಮೂರರಲ್ಲಿ ಪ್ರತಿಯೊಂದು ಎರಡು ವಿಧ-ಮೃದು (ಹಫೀಫ್), ಗಟ್ಟಿ (ತಕೀಲ್) ಎಂದು. 

ಮೃದು ಸಬಾಬ್		:	ಅವಧಾರಣೆ ಕೂಡಿದ ವ್ಯಂಜನದ ಅನಂತರ ಅವದಾರಣೆಯಿಲ್ಲದ					       	ವ್ಯಂಜನ ಬಂದು ಆದ ಉಚ್ಚಾರಾಂಶ.
				ಉದಾ :	ಕಾಮ್
ಗಟ್ಟಿ ಸಬಾಬ್		:	ಅವಧಾರಣೆ ಕೂಡಿದ ಎರಡು ವ್ಯಂಜನದ ಉಚ್ಚಾರಾಂಶ.
				ಉದಾ	:ಘರಾ
   	ಮೃದು ವತಾದ್		:	ಎರಡು ಅವಧಾರಣೆ ಕೂಡಿದ ವ್ಯಂಜನಗಳ ಮತ್ತು ಅವಧಾರಣೆ 				          		ಇಲ್ಲದ ಒಂದು ಅಕ್ಷರ.
					ಉದಾ : ಚಮಾನ್
	ಗಟ್ಟಿ ವತಾದ್		:	ಅವಧಾರಣೆಯಿಲ್ಲದ ಅಕ್ಷರ ನಡುವೆ ಬರುತ್ತದೆ ; 
					ಉದಾ : ಪಾರ್ ಸ ಆ.
	ಮೃದು ಘಾಸಿಲ		:	ಎರಡು ಅವಧಾರಣೆಗಳ ನಂತರ ನಕಾರಾಯುಕ್ತ ಗುರುತು.
					ಉದಾ	: ಜಾಬಾಲಿನ್.
	ಗಟ್ಟಿ ಘಾಸಿಲ		:	ಮೂರು ಅವಧಾರಣೆಗಳ ಅನಂತರ ನಕಾರಯುಕ್ತ ಗುರುತು.
					ಉದಾ	: ಬಾರಾಕಡಿನ್
ಗಣದಲ್ಲಿ ಎರಡು ವಿಧಗಳನ್ನು ಅಂಗೀಕರಿಸಲಾಗಿದೆ. ಯಾವ ಬಗೆಯ ಭಿನ್ನತೆ ಅಥವಾ ವಿರೂಪಕ್ಕೂ ಆಸ್ಪದ ಕೊಡದೇ ಇರುವಂಥದು ಸಾಲಿಮ್ ಎಂದರೆ ಪರಿಪೂರ್ಣ ಗಣಕ್ವಚಿದಂಶವನ್ನು ಸೇರಿಸಿಯೋ ತೆಗೆದುಹಾಕಿಯೊ ರಚಿಸಿದ್ದು ಗೈರ್-ಇ-ಸಾಲಿಮ್ ಅದಕ್ಕೆ ಮುಜಾಹಫ್ ಎಂದೂ ತಂದಿಟ್ಟ ಬದಲಾವಣೆಗೆ ಜಿಹಾಫ್ ಎಂದು ಹೆಸರುಂಟು. ಗಣಗಳಲ್ಲಿ ಎಂಟು ಮಾದರಿ ಅವುಗಳ ಸ್ವರೂಪ ಹೀಗಿದೆ:

ಫ ಊಲನ್			U - -
ಫೌರ್ನಲನ್				- U -
ಮಾಫಾ ಇಲನ್			U - -
ಮುಸ್ರಾಫಿಲನ್			- - U -
ಮುಫಾ ಇಲಕನ್			U - U U -
ಮುತಾಫಾ ಇಲನ್			U U - U -
ಫಾ ಇಲಾತನ್			- U - -
ರಮ ಪೂಲಾತು			- - - U

ಮೇಲೆ ಪಟ್ಟಿ ಮಾಡಿರುವ ಹತ್ತೊಂಬತ್ತು ಛಂದೋಪ್ರಕಾರಗಳಲ್ಲಿ (ಬುಹೂರ್) ತವೀಲ್‍ಮದೀನ್ ಬಸೀತ್ ವಫೀರ್‍ಗಳು ಅರಬ್ಬಿ ವೈಶಿಷ್ಟ್ಯ. ಅವನ್ನು ಉಪಯೋಗಿಸುವ ಪರ್ಷಿಯನ್ ಕವಿಗಳು ಬಲು ಕಡಿಮೆ. ಪರ್ಷಿಯನ್ ಕವಿಗಳಿಗೆ ಅಚ್ಚುಮೆಚ್ಚಾದವು. ಈ ಮೂರು: ಜದೀದ್ (ಫಾ ಇಲಾತನ್ + ಫಾ ಇಲಾತನ್ + ಮುಸ್ತಾಫಿಲನ್), ಖರೀಬ್ (ಮಾಫಾಇಲನ್ + ಮಾಫಾಇಲನ್ + ಫಾ ಇಲಾತನ್), ಮುಸಾಕಿಲ್ (ಫಾ ಇಲಾ ತನ್ + ಮಾಫಾಇಲನ್ + ಮಾಫಾಇಲನ್) ಮಿಕ್ಕ +11 ಪ್ರಕಾರಗಳು ಅರಬ್ಬಿ ಪರ್ಷಿಯನ್ ಕವಿಗಳಿಬ್ಬರಿಗೂ ಸ್ವೀಕರಣೀಯವಾಗಿವೆ. ಸ್ವಲ್ಪ ಉದ್ದವಾಗಿ ತೊನೆದಾಡುವಂತೆ ತೋರುವ ಪಂಕ್ತಿಯನ್ನು ಕಂಡರೆ ಪರ್ಷಿಯನ್ ಕವಿಗಳಿಗೆ ಬಹಳ ಇಷ್ಟ. ಈ ನಾಲ್ಕು ಪ್ರಕಾರಗಳು ಸಾಮಾನ್ಯವಾಗಿ ಕಂಡುಬರುತ್ತವೆ.

ರಮಾಲ್		:	- U - -  - U - -  U - -  - U --
ಹಜಾಜ್		:	U - - -     U - - -  U - - -  U - - -
ಮುಜ್‍ತಾಸ್	:	U - U -  U U - -  U - U - U U -
ಮುಸಾರಿ		:	- - U   - U - U  U - - U  - U -	

ಎರಡೂ ಅಥವಾ ಎರಡಕ್ಕೂ ಮೀರಿದವೂ ಆದ ಪಂಕ್ತಿಗಳು ಒಟ್ಟಾದರೆ ಒಂದು ಬಾಯಿಟ್ (ಡೇರೆ: ಮನೆ) ಆಗುತ್ತದೆ. ದ್ವಿಪದಿಗೆ ಮತ್‍ನವಿ ಎಂದು ಹೆಸರು. ಮಹಾಕವಿ ಫಿರ್ದೂಸಿಯ ಮೇರು ಕೃತಿ ಷಹಾನಾಮಾ ಮತ್‍ನವಿ ಛಂದಸ್ಸಿನಲ್ಲಿದೆ. ಅನೇಕ ಘಟನಾವಳಿಗಳಿಂದ ಕೂಡಿದ ದೀರ್ಘ ಕಥನಕ್ಕೂ ನಿಧಾನದಿಂದ ಆಲೋಚಿಸುವ ಚಿಂತನ ಸಮುದಾಯಕ್ಕೂ ಆಸಕ್ತ ನೀತಿಬೋಧೆಗೂ ದ್ವಿಪದಿ ಸಮುಚಿತವಾಗಿ ಸಲ್ಲುತ್ತದೆ. ಅಷ್ಟೊಂದು ವಿಶಾಲವಲ್ಲದ ನೀಳ್ಗಥೆಗಳಿಗೂ ಅದರಿಂದಲೇ ಉಪಕಾರ. ಸಪ್ರಾಸ ದ್ವಿಪದಿಯಾದ ಮತ್‍ನವಿಯನ್ನು ಹಿಂದೆ ಅರಬ್ಬಿ ಕವಿಗಳು ಬಳಸಿಕೊಂಡಿದ್ದರೂ ಅದೇತಕ್ಕೊ ಅವರಿಗೆ ಏಕಪ್ರಾಸದ ಚಿಕ್ಕ ಚಿಕ್ಕ ಪದ್ಯಗಳ ಕಡೆಗೆ ಒಲವು. ಸಪ್ರಾಸ ದ್ವಿಪದಿಯನ್ನು ಪರಿಷ್ಕರಿಸಿ ಅದರಿಂದ ದೀರ್ಘ ಕವಿತೆಗಳನ್ನು ನಿರ್ಮಾಣ ಮಾಡುವುದರಲ್ಲಿ ಪರ್ಷಿಯನರು ಎತ್ತಿದ ಕೈ ಎನಿಸಿಕೊಂಡರು.

ಚತುಷ್ಪದಿಯೂ ಪರ್ಷಿಯನ್ನರ ಒಂದು ಪ್ರಸಿದ್ಧ ಪದ್ಯಭೇದ. ಅದು ಎರಡು ದ್ವಿಪದಿ (ದು-ಬಾಯಿಬ್) ಆಗಿರಬಹುದು ಅಥವಾ ನಾಲ್ಕು ಮಿಶ್ರಾಗಳು (ದುಬಾಇ) ಆಗಿರಬಹುದು. ಪಾಶ್ಚಾತ್ಯರಿಗೆ ವಿಶೇಷ ಪರಿಚಿತವಾದ ಉಮ್ಮರ್ ಖಯ್ಯಾಮನ ರುಬಾಇ ಎಲ್ಲರಿಗೂ ಗೊತ್ತಾದದ್ದು. ಅದರ ಪ್ರಾಸಬಂಧ ಎ ಎ ಬಿ ಎ ಸಾಧಾರಣವಾಗಿ ಎ ಎ ಎ ಎ ಇಂಗ್ಲಿಷ್ ಕವಿ ಎಡ್ವರ್ಡ್ ಫಿಟ್ಸ್‍ಜೆರಲ್ಡನ ಭಾಷಾಂತರ ಖಯ್ಯಾಮನ ಮೂಲಕ್ಕೆ ಪೂರ್ತಿ ಹೊಂದಿಕೊಂಡಿದ್ದಲ್ಲ. ಏತಕ್ಕೆಂದರೆ, ಚತುಷ್ಟದಿ (ದುಬಾಯಿಟ್ಟೆ ಆಗಲಿ ರುಬಾಇಯೆ ಆಗಲಿ) ಎಷ್ಟೇ ಆದರೂ ಬಿಡಿ ಪದ್ಯ ಜಾತಿಗೆ ಸೇರಿದ್ದು. ಒಂದೇ ಪ್ರಧಾನ ತತ್ವ ಮತ್ತು ಅದಕ್ಕೆ ಸಂಬಂಧಿಸಿದ ಅನುತತ್ವಗಳ ನಿಷ್ಠೆಯ ಪ್ರತಿಪಾದನೆಗೆ ಒಗ್ಗುವಂತೆ ತೋರುವುದಿಲ್ಲ. ಆಧುನಿಕ ಕವಿಗಳು ರಾಜಕೀಯ ವಿಡಂಬನಕ್ಕೆ ಅದನ್ನು ಬಹುವಾಗಿ ಬಳಸಿಕೊಳ್ಳುತ್ತಾರೆ.

ಪ್ರಾಸವನ್ನು ಕುರಿತು ಒಂದೆರಡು ಮಾತು ಆವಶ್ಯಕ. ಪ್ರಾಸ (ಖ್ವಾಫಿಯಾ) ಪಂಕ್ತಿಯ ಅಂತ್ಯದಲ್ಲಿ ಬರುತ್ತದೆ. ಅದರ ಮೂಲಾಂಶ ಯಾವುದೆಂದರೆ ರವೀ - ಎಂದರೆ ಪ್ರಾಸಗೊಳ್ಳುವ ಪದದ ಕಟ್ಟಕಡೆಯ ಒತ್ತಿಲ್ಲದ ಅಕ್ಷರ. ಮೊದಲು ಬರುವ ನಾಲ್ಕು ಅಕ್ಷರಗಳು ಮಧ್ಯೆ ರವೀ ಆಮೇಲೆ ಸೇರಿಕೊಳ್ಳುವ 4 ಅಕ್ಷರಗಳು ಇವುಗಳ ಮೂಲಕ ನಾನಾ ಬಗೆಯ ಪ್ರಾಸವನ್ನು ವಿರಚಿಸಲಾಗುತ್ತದೆ. ಅವಧಾರಣೆಯನ್ನು ಪಡೆಯದ ರವೀಗೆ ರವೀ -ಇ-ಮುಖಯ್ಯಾದ್ ಎಂದು ಹೆಸರು. ಹತ್ತಿರದ ಅಕ್ಷರದ ದೆಸೆಯಿಂದ ಅವಧಾರಣೆ ಗಳಿಸಿಕೊಂಡದ್ದಕ್ಕೆ ರವೀ-ಇ-ಮುಟ್ಲಾಖ್ ಎಂದು ಹೆಸರು. ಪ್ರಾಸ ಹಲವು ತರಹೆಯ ಚಮತ್ಕಾರ ಪ್ರದರ್ಶನಕ್ಕೆ ನೆರವೀಯುತ್ತದೆ.
ಮತ್‍ನವಿ ರುಬಾಯಿ ಮೊದಲಾದುವು ಹಲವು ಪ್ರಾಸಗಳಿಂದ ಕೂಡಿದವು. ಅಂತೆಯೇ ಏಕಪ್ರಾಸದ ಪದ್ಯ ಜಾತಿಗಳು ಪರ್ಷಿಯನ್ ಕಾವ್ಯದಲ್ಲಿ ಕೆಲವು ಉಂಟು; ಕವಿಗಳ ವ್ಯಾಮೋಹಕ್ಕೂ ಅವು ಪಾತ್ರವಾಗಿವೆ. ಅವುಗಳಲ್ಲಿ ಮುಖ್ಯವಾದವು ಕಸೀದ ಮತ್ತು ಗಜಲ್ ಎರಡಕ್ಕೂ ಛಂದೋಪ್ರಕಾರದಲ್ಲಿ ಏನೇನೂ ವ್ಯತಾಸವಿಲ್ಲ. ಪ್ರಾರಂಭದ ಪಂಕ್ತಿಗೆ ಮಟ್‍ಲ ಎಂದು ಹೆಸರು; ಅದರಲ್ಲಿ ಒಳಪ್ರಾಸ ಇರುತ್ತದೆ.

ಕಸೀದ ಮೂವತ್ತರಿಂದ ನೂರಕ್ಕೂ ಮೇಲ್ಪಟ್ಟು, ಎಂದರೆ ನೂರಿಪ್ಪತ್ತರವರೆಗೂ ಪಂಕ್ತಿಗಳನ್ನು ಹೊಂದಿರಬಹುದು. ಮೊದಮೊದಲು ಅದು ರಾಜಾಶ್ರಯವನ್ನು ಸಂಪಾದಿಸುವುದಕ್ಕೂ ರಾಜನ ಕೋಪವನ್ನು ಶಮನ ಮಾಡುವುದಕ್ಕೂ ಕವಿಗಳು ಬಳಸುತ್ತಿದ್ದ ಪ್ರಶಂಸಾ ಪ್ರಗಾಥವಾಗಿದ್ದಿತು. ಬರಬರುತ್ತಾ ಅದನ್ನು ತತ್ವ ಪ್ರತಿಪಾದನೆಗೂ ಧಾರ್ಮಿಕ ಪ್ರಚಾರಕ್ಕೊ ಪ್ರಕೃತಿ ವರ್ಣನೆಗೊ ಆದರ್ಶ ನಿರೂಪಣೆಗೊ ತಕ್ಕುದಾದ ಪದ್ಯ ಮಾಧ್ಯಮವಾಯಿತು. ಜೀವನದಲ್ಲಿ ಹಾನಿಯೊ ನಷ್ಟವೊ ಸರ್ವ ಸಾಧಾರಣವಾಗಿ ಸಂಭವಿಸುತ್ತಿದ್ದುದರಿಂದ ಶೋಕ ಸಂತೈಕೆಗಾಗಿ ಕಸೀದವನ್ನು ಬರೆಯುವುದು ವಾಡಿಕೆ ಆಯಿತು. ಆ ಕಾರಣದಿಂದ ಕಸೀದ ಎಂದರೆ ಶೋಕಗೀತೆ ಎಂಬ ತಪ್ಪು ಅಭಿಪ್ರಾಯ ಮೂಡಿಬಂತು. ಉತ್ಪ್ರೇಕ್ಷೆ ಅತಿಶಯೋಕ್ತಿ ಜಟಿಲರೂಪಕ ಅಪೂರ್ವಾಲಂಕಾರ ಮುಂತಾದ ಆಲೋಚನಾ ವೈಶಿಷ್ಟ್ಯಗಳಿಂದಲೂ ಭಾಷಾ ಚಾತುರ್ಯಗಳಿಂದಲೂ ನಿಬಿಡವಾದ ಕಸೀದ ಕವಿಗಳ ಸ್ಪರ್ಧೆ ಪ್ರತಿಸ್ಪರ್ಧೆಗಳಿಗೆ ಅನುಕೂಲ ಛಂದಸ್ಸಾಗಿದೆ.

ಗಜಲ್ ಎಂಬುದು ಪ್ರೇಮವನ್ನೇ ಮುಖ್ಯ ವಿಷಯವನ್ನಾಗಿ ಮಾಡಿಕೊಂಡಿರುವ ಒಂದು ಬಗೆಯ ಕಿರು ಪ್ರಗಾಥ. ಅದಕ್ಕೆ ಇರುವುದು ಭಾವಗೀತೆಯ ಲಕ್ಷಣವೆ, ಆಶಯವೆ, ಸಂವಿಧಾನವೆ. ಅದರಲ್ಲಿ ಸಾಮಾನ್ಯವಾಗಿ ಹತ್ತರಿಂದ ಮೂವತ್ತರವರೆಗಿನ ಪಂಕ್ತಿಗಳು ಇರುತ್ತವೆ. ಅದರ ಮೂಲವನ್ನು ಪ್ರಾಯಶಃ ಪ್ರಾಚೀನ ಅರಬ್ಬಿ ಕವಿಗಳು ತಮ್ಮ ಕಾವ್ಯಾರಂಭದಲ್ಲಿ ನುಡಿಯುತ್ತಿದ್ದ ನಸೀಬ್‍ನಲ್ಲಿ (ಪ್ರೇಮ ಪೀಠಿಕೆ) ಕಾಣಬಹುದೋ ಏನೋ. ಪ್ರೇಮದ ಜೊತೆಯಲ್ಲೇ ಸುರಾಪಾನವು ವರ್ಣಿತವಾಗುತ್ತದೆ. ಪ್ರಧಾನ ಪಾತ್ರ ಪ್ರೇಮಿಯಾಗಿರಬಹುದು, ಪ್ರೇಯಸಿಯಾಗಿರಬಹುದು. ಕೆಲವು ವೇಳೆ ಪೋಷಕನಾದ ಅರಸನನ್ನೇ ಪ್ರೀತಿ ಮತ್ತು ಭಕ್ತಿಯ ಕುರುಹವನ್ನಾಗಿ ಇಟ್ಟುಕೊಳ್ಳುವುದು ಸಾಧ್ಯ. ಅತೀಂದ್ರಿಯವಾದ ಅರ್ಥವನ್ನೂ ಕವಿ ಧ್ವನಿಗೈಯಬಹುದು. ಅಲ್ಲಲ್ಲಿ, ಪ್ರೇಮಿ ಎಂದರೆ ದೇವರು, ಮಧ್ಯ ಎಂದರೆ ಭಕ್ತಿಯ ಆವೇಶ ಹೀಗೆ. ಗಜಲ್‍ನಲ್ಲಿ ಕವಿ ಕೊನೆಯ ಸಾಲಿನಲ್ಲಿ (ಮುಖ್ತಾ) ತನ್ನ ಕಾವ್ಯನಾಮವನ್ನು (ತಹಲ್ಲುಸ್) ಇಟ್ಟಿರುತ್ತಾನೆ. 

ಖಿತ ಎಂಬ ಖಂಡ ಕವಿತೆಯೂ ತರ್ಕೀಬ್ ಬಂದ್ ಮತ್ತು ತರ್ಜೀ ಬಂದ್ ಎಂಬ ಕಿರುಕವಿತೆಗಳೂ ಇವೆ. 
(ನೋಡಿ- ಅರಬ್ಬೀ-ಛಂದಸ್ಸು)									(ಎಸ್.ವಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ